ಗೌಹತಿ-
ಅಸ್ಸಾಮಿನ ರಾಜಧಾನಿ, ಕಾಮರೂಪ ಜಿಲ್ಲೆಯ ಮುಖ್ಯ ಪಟ್ಟಣ. ಅಸ್ಸಾಂ ರಾಜ್ಯದ ಸಾಂಸ್ಕøತಿಕ ಕೇಂದ್ರ. ಇದು ಉ. ಅ. 26011 ' ಪೂ.ರೇ. 910 45' ಮೇಲೆ ಇದೆ. ಜನಸಂಖ್ಯೆ (1,22, 981 (1971). ಬ್ರಹ್ಮಪುತ್ರಾ ನದಿಯ ಮೇಲೆ ಇದೆ. ಏಕಕಾಲದಲ್ಲಿ ರೈಲು ಮತ್ತು ಸಂಚಾರಕ್ಕೆ ಅನುಕೂಲವಾಗುವಂತೆ ಈ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ದೊಡ್ಡ ಸೇತುವೆಗೆ ಪಾಂಡು ಸೇತುವೆ ಎಂದು ಹೆಸರು. ಈ ನಗರದ ಒಂದು ಕಡೆ ದಟ್ಟಕಾಡು, ಅರ್ಧಚಂದ್ರಾಕಾರದ ಬೆಟ್ಟ, ಮತ್ತೊಂದು ಕಡೆ ಅಗಲವಾದ ಬ್ರಹ್ಮಪುತ್ರಾ ಪ್ರವಾಹ  - ಇದೊಂದು ರಮಣೀಯ ದೃಶ್ಯ. ಈ ನಗರ ಇಡೀ ಈಶಾನ್ಯ ಭಾರತದ ಹೆಬ್ಬಾಗಿಲಿನಂತಿದೆ. 

ಕೇಂದ್ರರಾಜ್ಯಸರ್ಕಾರಗಳ ಕಚೇರಿಗಳೂ ರಾಜ್ಯದ ಉಚ್ಚ ಭಾರತದ ನ್ಯಾಯಾಲಯವೂ ಇಲ್ಲಿವೆ. ಗೌಹತಿ ಪ್ರಮುಖ ವಿದ್ಯಾಕೇಂದ್ರ. ಅನೇಕ ಪ್ರೌಢಶಾಲೆಗಳೂ ಇಂಜಿನಿಯರಿಂಗ್, ಮೆಡಿಕಲ್ ಮತ್ತು ವೆಟರನರಿ ಕಾಲೇಜುಗಳೂ ಸ್ಥಾಪನೆಗೊಂಡಿವೆ. ಗೌಹತಿ ವಿಶ್ವವಿದ್ಯಾಲಯ ಈಶಾನ್ಯ ರಾಜ್ಯಗಳಲ್ಲೆಲ್ಲ ಪ್ರಸಿದ್ಧವಾದ್ದು. 1948 ರಲ್ಲಿ ಆರಂಭವಾದ ಈ ವಿಶ್ವಿದ್ಯಾಲಯದ ಕಾರ್ಯಾಲಯ ಗೌಹಾತಿಯಲ್ಲಿದೆ. ಇದಕ್ಕೆ 103 ಕಾಲೇಜುಗಳು ಸೇರಿವೆ. ಅವುಗಳಲ್ಲಿ 102 ಅಂಗೀಕೃತ ಕಾಲೇಜುಗಳು. ಒಂದು ಮಾತ್ರ ಅಂಗಿಕ (ಕಾನ್ಸ್ಟಟ್ಯೂಯೆಂಟ್) ಕಾಲೇಜು. ಈ ನಗರದಲ್ಲಿ ಒಂದು ವಸ್ತು ಸಂಗ್ರಹಾಲಯವೂ ಒಂದು ಮೃಗಾಲಯವೂ ಉಂಟು. ನಗರಕ್ಕೆ 2 ಮೈ. ದೂರದಲ್ಲಿ ಬೆಟ್ಟವೊಂದರ ಮೇಲಣ ಕಾಮಾಖ್ಯ ದೇವಾಲಯ, ಬ್ರಹ್ಮಪುತ್ರ ನದಿಯ ಶಿಲಾ ದ್ವೀಪವೊಂದರ ಮೇಲಣ ಉಮಾನಂತ ದೇವಾಲಯ, ಅಶ್ವಕ್ರಾಂತ ಮತ್ತು ನವಗ್ರಹ ದೇವಾಲಯಗಳು. ವಸಿಷ್ಠ ಆಶ್ರಮ - ಇವು ಈ ನಗರದ ಆಸುಪಾಸಿನ ಹಿಂದೂ ಕ್ಷೇತ್ರಗಳು. ಸಕಲೇಶ್ವರ ಬೆಟ್ಟದ ಬುಡದಲ್ಲಿ ಹಲವು ಸ್ಮಾರಕಗಳೂ ಕೆರೆಗಳೂ ಇವೆ. ಗೌಹತಿ ನಿವಾಸಿಗಳಲ್ಲಿ ಅಸ್ಸಾಮಿ ಭಾಷೆ ಆಡುವವರೇ ಹೆಚ್ಚು.

ಬೇಸಗೆಯಲ್ಲಿ ಇಲ್ಲಿ ಬಹಳ ಬಿಸಿಲು, ಚಳೀಗಾಲದಲ್ಲಿ ಬಹಳ ಚಳಿ. ಮಳೆ ಹೆಚ್ಚು ಈ ಪ್ರದೇಶದ ಬೆಳೆಗಳಲ್ಲಿ ಮುಖ್ಯವಾದವು ಬತ್ತ, ಸಣಬು, ಮತ್ತು ಎಣ್ಣೆಕಾಳುಗಳು, ಬ್ರಹ್ಮಪುತ್ರಾನದಿಯಲ್ಲಿ ಮೀನುಹಿಡಿಯುವುದೂ ಅನೇಕರ ವೃತ್ತಿ.

ಗೌಹತಿ ನಗರ ರಾಜ್ಯದ ಮುಖ್ಯ ವಾಣೀಜ್ಯಕೇಂದ್ರ. ಇದಕ್ಕೆ ಭೂ, ಜಲ, ವಾಯು, ಸಂಪರ್ಕವಿದೆ. ರಾಜ್ಯದ ಎಲ್ಲೆಡೆಗಳಿಗೂ ಇಲ್ಲಿಂದ ರಸ್ತೆಗಳುಂಟು. ಇದು ಪ್ರಮುಖ ವಿಮಾನನಿಲ್ದಾಣಗಳಲ್ಲೊಂದು. ಬೋಯಿಂಗ್‍ಗಳಂಥ ದೊಡ್ಡ ವಿಮಾನಗಳು ಇಲ್ಲಿ ಇಳಿಯಲು ವ್ಯವಸ್ಥೆಯಿದೆ. ಈಶಾನ್ಯ ಭಾರತದ ಇತರ ರಾಜ್ಯಗಳಾದ ನಾಗಾಲ್ಯಾಂಡ್, ತ್ರಿಪುರ, ಮಣಿಪುರ, ಮಿಜೊರಾಂ ಮತ್ತು ಅರುಣಾಚಲ ಪ್ರದೇಶಗಳಿಗೆ ಹೋಗುವ ವಿಮಾನಗಳೆಲ್ಲವೂ ಗೌಹತಿಯ ಮೂಲಕವೇ ಹೋಗಬೇಕು. ಇದಕ್ಕೆ ಸಮೀಪದಲ್ಲಿ ನೂನ್‍ಮತಿ ಎಣ್ಣೆಶುದ್ಧೀಕರಣ ಕೇಂದ್ರವಿದೆ. ಮಕ್ಕಳ ಹಾಲಿನ ಪುಡಿಯನ್ನು ಉತ್ಪಾದಿಸುವ ಕಾರ್ಖಾನೆಯೂ ಇಲ್ಲಿದೆ.  ಜನಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಕೈಗಾರಿಕೆಗಳು ಸ್ಥಾಪಿತವಾಗಿವೆ.

ಭಾರತದ ಪುರಾಣಪ್ರೋಕ್ತವಾದ ನಗರಗಳಲ್ಲಿ ಗೌಹತಿಯೂ ಒಂದು. ಇದು 400ರ ಸುಮಾರಿನಲ್ಲಿ ಕಾಮರೂಪ ರಾಜ್ಯದ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ. ಆಗ ಇದಕ್ಕೆ ಪ್ರಾಗ್‍ಜ್ಯೋತಿಪುರವೆಂದು ಹೆಸರಿತ್ತು. 17 ನೆಯ ಶತಮಾನದಲ್ಲಿ 50 ವರ್ಷಗಳ ಕಾಲದಲ್ಲಿ, ಎಂಟು ಸಾರಿ ಇದನ್ನು ಮುಸ್ಲಿಮರೂ ಅಹೋಂ ದೊರೆಗಳೂ ಒಬ್ಬರಿಂದೊಬ್ಬರು ವಶಪಡಿಸಿಕೊಂಡರು. 1681 ಮತ್ತು ಇದು ಕೆಳ ಆಸ್ಸಾಮಿನ ಅಹೋಂ ರಾಜ್ಯಪಾಲನ ಅಧಿಕಾರಸ್ಥಾನವೂ 1786 ರಲ್ಲಿ ಅಹೋಂ ದೊರೆಯ ರಾಜಧಾನಿಯೂ ಆಯಿತು. 1816 ಬರ್ಮೀಯರು ಇದನ್ನು ಆಕ್ರಮಿಸಿಕೊಂಡಿದ್ದರು.  1826ರಲ್ಲಿ ಅಸ್ಸಾಂ ಬ್ರಿಟಿಷರ ವಶವಾದಾಗ ಇದು ಅಸ್ಸಾಮಿನ ಆಡಳಿತಕೇಂದ್ರವಾಯಿತು. 1826 ರಲ್ಲಿ ಆಸ್ಸಾಂ ಬ್ರಿಟಿಷರ ವಶವಾದಾಗ ಇದು ಅಸ್ಸಾಮಿನ ಆಡಳಿತಕೇಂದ್ರವಾಯಿತು. 1874 ರಲ್ಲಿ ರಾಜಧಾನಿಯನ್ನು ಪಿಲಾಂಗಿಗೆ ವರ್ಗಮಾಡಲಾಯಿತು. ಮೇಘಾಲಯ ರಾಜ್ಯ ಸ್ಥಾಪನೆಯಾದ ಮೇಲೆ ಅಸ್ಸಾಂ ಮೇಘಾಲಯಗಳೆರಡಕ್ಕೂ ಷಿಲಾಂಗೇ ರಾಜಧಾನಿಯಾಗಿತ್ತು. ಈಗ ಅಸ್ಸಾಮಿನ ರಾಜಧಾನಿ ಗೌಹಾತಿ.

1897 ರಲ್ಲಿ ಭೂಕಂಪದಿಂದಾಗಿ ಈ ನಗರ ನಾಶವಾಗಿತ್ತು. ಇದನ್ನು ಪುನರ್ನಿರ್ಮಿಸಲಾಗಿದೆ.
							(ಎಂ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ